ಮನುಷ್ಯರ ಸ್ವಂತ ಕಲ್ಪನಾ ಸೃಷ್ಟಿಯೇ
ಹಗಲು ಕನಸು ಕಾಣುವ ಸ್ವಭಾವವಿದ್ದ ಒಬ್ಬ ಮನುಷ್ಯನು, ಒಂದು ದಿನ, ಹಸಿವಾದಾಗ ಆಹಾರವೇನೂ ಸಿಕ್ಕದಿರಲು,
ದಾರಿಯಲ್ಲಿ ಒಂದು ಮರದ ಕೆಳಗೆ ಕುಳಿತು ಕಣ್ಣು ಮುಚ್ಚಿಕೊಂಡು, ಮನಸ್ಸಿನಲ್ಲಿ ಬಿಸಿಬಿಸಿ ರೊಟ್ಟಿಯನ್ನೂ ಚಟ್ಣಿಯನ್ನೂ ತಿನ್ನುವುದಕ್ಕೆ ತೊಡಗಿದನು.
ಕಲ್ಪನಾ ಬಲವುಳ್ಳ ಆ ಬಡಪಾಯಿಯು, ಸ್ವಲ್ಪ ಹೊತ್ತು ಮೈಮರೆತು, ಆ ಬಿಸಿಬಿಸಿ ರೊಟ್ಟಿಯನ್ನು ತಿನ್ನುವುದರೊಳಗೆ, ಆ ಚಟ್ಣಿಯಲ್ಲಿ ಖಾರವಾದೊಂದು ಮೆಣಸಿನ ಕಾಯಿಯು ಬಂದಿತು. ಅದು ಬಹಳ ಖಾರವಾಗಿತ್ತು. ಬಿಸಿಯ ಜೊತೆಗೆ ಆ ಖಾರವೂ ಸೇರಿ, ಅವನ
ಕಿವಿಗಳಲ್ಲಿ ಸಲಾಕಿಯನ್ನು ಚುಚ್ಚಿದಂತಾಯಿತು. ಕಣ್ಣುಗಳಲ್ಲಿಯೂ ನೀರು ಬಂದಿತು. ಆದರೆ ಅವನು ತಿನ್ನುವಾಗ ನೀರನ್ನು ಇಟ್ಟುಕೊಳ್ಳುವುದಕ್ಕೆ ಮರೆತಿದ್ದನು.
ಮಧ್ಯದಲ್ಲಿ ಏಳುವ ಪದ್ಧತಿಯೂ ಇರಲಿಲ್ಲ;
ತಂದುಕೊಡುವವರೂ ಇರಲಿಲ್ಲ.
ಅವನ ಕಲ್ಪನೆಯಲ್ಲಿ ನೀರೇ ಸಿಕ್ಕಲಿಲ್ಲ.
ಅವನಿಗೆ ಬಹಳ ಕಷ್ಟವಾಯಿತು. (ನಮ್ಮ ಕನಸಿನಲ್ಲಿ ಆಗುವುದೂ ಹೀಗೇ ಅಲ್ಲವೆ!) ಪಾಪ! ಆ ಬಡಪಾಯಿಯು ನಾಲಿಗೆಯನ್ನು ಗಾಳಿಗೆ ಚಾಚಿ, ಖಾರವನ್ನು ಕಳೆಯಲು ಗಾಳಿಯನ್ನು ಸೇವಿಸುತ್ತಾ ಕುಳಿತಿದ್ದನು.
ಆ ದಾರಿಯಲ್ಲಿ ಹೋಗುವವನೊಬ್ಬನು ಅವನನ್ನು ನೋಡಿದನು. ಕಣ್ಣನ್ನು ಮುಚ್ಚಿಕೊಂಡು ಬಾಯಿ ತೆರೆದು ನಾಲಿಗೆಯನ್ನು ಹೊರಕ್ಕೆ ಚಾಚಿ ನೀರು ಸುರಿಸುತ್ತಿರುವ ಈ ಮನುಷ್ಯನ ಫಜೀತಿಯನ್ನು ನೋಡಿ, ಅವನಿಗೆ ಆಶ್ಚರ್ಯವೂ ಕನಿಕರವೂ ಆಯಿತು. ಆತನು
ಇವನನ್ನು ಎಚ್ಚರಗೊಳಿಸಿ, ವಿಚಾರವೇನೆಂದು ಕೇಳಿದನು. ಆಗ ಅವನು ಬೆಚ್ಚಿಬಿದ್ದು, ಎಚ್ಚರಗೊಂಡು, ತನ್ನ ಕಲ್ಪನಾ ಕಥೆಯನ್ನು ವಿಷಾದದಿಂದ ಹೇಳಿದನು. ಆ ದಾರಿಹೋಕನು ಬಿದ್ದು ಬಿದ್ದು ನಗುತ್ತಾ ಹೇಳಿದನು:
“ಅಲ್ಲಯ್ಯಾ! ಮಂಕುತಿಮ್ಮಯ್ಯಾ! ಎಂಥಾ ಮರುಳು ನೀನು! ಕಾಲ್ಪನಿಕ ಆಹಾರದ ಮೇಲೆಯೇ ನೀನು ಬದುಕಬೇಕಾಗಿದ್ದರೆ,
ಖಾರದ ಮೆಣಸಿನ ಕಾಯಿಯನ್ನು ಬಿಟ್ಟು, ಸಿಹಿ ತಿಂಡಿಗಳನ್ನೇಕೆ ಆರಿಸಿಕೊಳ್ಳಲಿಲ್ಲ?
ನಿನ್ನ ಸ್ವಂತ ಸೃಷ್ಟಿಯೇ,
ನಿನ್ನ ಮೋಜಿನ ಕಲ್ಪನೆಯೇ ಆಗಿದ್ದುದರಿಂದ ಉತ್ತಮೋತ್ತಮವಾದ ಆಯ್ಕೆಯನ್ನೇಕೆ ಮಾಡಿಕೊಳ್ಳಲಿಲ್ಲ?
ಪ್ರಿಯಕರವೂ ಹಿತಕರವೂ ಸುಖಕರವೂ ಆದ ಸೃಷ್ಟಿಯು ಅಷ್ಟೇ ಸುಲಭವಾಗಿದ್ದರೂ ಅದನ್ನೇಕೆ ಅವಿವೇಕದಿಂದ ಬಿಟ್ಟು, ಕಷ್ಟವನ್ನು ಕಲ್ಪಿಸಿಕೊಂಡೆ?” ಎಂದು ಕೇಳಿದನು.
ಅದಕ್ಕೆ ಆ ಬಡಪಾಯಿಯು “ಆಹಾ! ನೀನು ಹೇಳುವುದು ನಿಜವಾಗಿ ತೋರುತ್ತದೆ. ಅಬ್ಬಾ! ನನಗಿದು ಹೊಳೆದೇ ಇರಲಿಲ್ಲ.
ಆದರೆ ಅದೇಕೋ ಮೊದಲಿನಿಂದಲೂ ನನಗದೇ ಅಭ್ಯಾಸವಾಗಿದೆ;
ಅಷ್ಟೇ ಅಲ್ಲ, ಹೆಚ್ಚು ಸುಲಭವೂ ಪ್ರಿಯವೂ ಆಗಿದೆ. ಇಷ್ಟವಲ್ಲದ ಕಷ್ಟ ತಪ್ಪಿಲ್ಲವೆಂಬುದೂ ನಿಜ” ಎಂದನು.
ಈ ಕಥೆಯಿಂದ ನಿಮಗೆ ಅರ್ಥವಾದ ಸಂದೇಶವನ್ನು ತಿಳಿಸಿ